Tuesday, December 29, 2020

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ 'ಥೆ' ಭಾವ

ಸಾರ್ಥ ಎಂಬುದು ವಾಣಿಜ್ಯ ಪದ್ಧತಿ. ಎಂಟನೇ ಶತಮಾನದಲ್ಲಿ ಆನೆ, ಕುದುರೆ, ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ವಾಣಿಜ್ಯ ಪದಾರ್ಥಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತ ದೂರ ದೂರ ದೇಶಗಳಲ್ಲಿ ಸಂಚರಿಸುವುದಕ್ಕೆ ಸಾರ್ಥ ಎನ್ನುತ್ತಿದ್ದರು. ಎಂಟನೇ ಶತಮಾನದಲ್ಲಿ ನಡೆದಿರಬಹುದಾರ ಕಲ್ಪನೆಯೇ ಇಲ್ಲಿಯ ಕಥಾ ವಸ್ತು.

ಸಾರ್ಥದೊಡೆಯ ಎಸ್. ಎಲ್ ಭೈರಪ್ಪ ನವರದೊಡನೆ ಒಂದು ಕಿರು ಪ್ರಯಾಣ ಮಾಡಿ ಬರೋಣ.

ಯಾವುದೇ ಕಾದಂಬರಿಗಳು ನಮಗೆ ಇಷ್ಟವಾಗಬೇಕಾದರೆ ಅದರ ಅನೇಕ ವಿಷಯಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಮುಖ್ಯವಾಗಿ ನಮಗೆ ಅದರ ಪಾತ್ರಗಳು ಸನಿಹವಾಗುತ್ತವೆ. ಇವು ನಮ್ಮ ಜೀವನದಲ್ಲಿ ಎಂದೋ ಬಂದು ಹೋದ, ನಾವು ನೋಡಿದ, ಕೇಳಿದ ವ್ಯಕ್ತಿಗಳಿಗೆ ಹೋಲುತ್ತವೆ. ಇಲ್ಲಿ ವ್ಯಕ್ತ ಪಡಿಸುವ ಭಾವಗಳು ನಮ್ಮದಾಗಿರುತ್ತವೆ ಹಾಗು ನಮ್ಮನ್ನು ಕಾಡುತ್ತಿರುತ್ತವೆ. ನಮ್ಮಲ್ಲಿ ಮೂಡುವ ಅನೇಕ ವಿಷಯಗಳು, ಪ್ರಶ್ನೆಗಳು ಪಾತ್ರಗಳಲ್ಲಿ ಮೂಡುತ್ತವೆ. ಇಲ್ಲಿ ಬರುವ ಸಂದರ್ಭಗಳು ನಮಗೆ ಸಕಾರಾತ್ಮಕವಾಗಿ ಪ್ರಚೋದಿಸುತ್ತವೆ. ಇವೆಲ್ಲ ಅಂಶಗಳು ನಮಗೆ ಭೈರಪ್ಪನವರ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಹಾಗೆಯೇ ಇಷ್ಟವೂ ಆಗುತ್ತವೆ.

ಸಾರ್ಥದಲ್ಲಿ ಬರುವ ಕೆಲವು ಸಂದರ್ಭೋಕ್ತಿಗಳನ್ನು ಗಮನಿಸೋಣ. ಕಾದಂಬರಿಯ ಪಾತ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿಆಡಿದ ಮಾತುಗಳು ಇವು.

. ಆತ್ಮ ಕಥನದಲ್ಲಿ ಕಥನವು ನಾನು, ನಾನು, ನಾನು ಎಂಬ ಹಂದರದಲ್ಲಿ ಸಿಕ್ಕಿಕೊಂಡು ಬಿಡುತ್ತವೆ.

. ಒಂದು ಶಾಸ್ತ್ರದ ರಹಸ್ಯವನ್ನು ಪೂರ್ಣವಾಗಿ ಪರಿಚಯಿಸಿಕೊಳ್ಳುವವರೆಗೂ ಶಾಸ್ತ್ರವನ್ನು ಖಂಡಿಸಲು ಸಾಧ್ಯವಿಲ್ಲ.

. ರೂಪಾತೀತವನ್ನು ರೂಪದಲ್ಲಿ ಭಾವಿಸಿ ಉಪಾಸಿಸುವ ಅವಕಾಶವಿಲ್ಲದಿದ್ದರೆ ಜನಸಾಧಾರಣರಿಗೆ ಶೂನ್ಯ ಕವಿಯುತ್ತದೆ.

. ವಿಗ್ರಹವಿಲ್ಲದೆಯೂ ದೇವರ ಪ್ರಾರ್ಥನೆ ಸಾಧ್ಯ. ಮೂಲ ವೈದೀಕ ಪದ್ದತಿಯಲ್ಲಿ ವಿಗ್ರಹವು ಇಲ್ಲ, ಗುಡಿಯೂ ಇಲ್ಲ, ಹೋಮ ಹವನಗಳು ಮಾತ್ರ.

. ನೋವನ್ನು ಸೃಷ್ಟಿಸಬಹುದು. ಅದನ್ನು ವಿಶೇಷವಾಗಿ ಸೃಷ್ಟಿಸುವ ಶಕ್ತಿ ರೋಗರುಜಿನಾದಿಗಳಿಗಿಂತ ಹೆಚ್ಚಾಗಿ ಮನುಷ್ಯನಿಗೆ ಮಾತ್ರ ಉಂಟು.

 

ರೀತಿಯ ಅನೇಕ ಆಲೋಚನೆಗಳು , ಪ್ರಶ್ನೆಗಳು ನಮ್ಮಲ್ಲಿಯೂ ಮೂಡಿದೆಯಲ್ಲವೇ ? ನಿರ್ಗುಣ, ನಿರಾಕಾರ, ಪರಬ್ರಹ್ಮ ಸ್ವರೂಪಿಯಾದ ಭಗವಂತನನ್ನು ಹೇಗೆ ಧ್ಯಾನಿಸುವುದು ಎಂದು ನಾನು ಹಲವು ಬಾರಿ ಯೋಚಿಸಿದ್ದೆ. ಎಷ್ಟೋ ಬಾರಿ ಯಾವುದೋ ವಿಷಯ ಚರ್ಚೆಗಿಳಿದಾಗ ವಿಷಯದ ಆಳ ತಿಳಿಯದೆ ಮುಖಭಂಗವಾದದ್ದು ಉಂಟು. ಹೀಗೆ ಹತ್ತು ಹಲವು ವಿಷಯಗಳು ನನ್ನ ಯೋಚನೆಗಳಿಗೆ ಲಯಕೊಟ್ಟಿವೆ. ಹಾಗು ಇವು ನಮ್ಮೊಂದಿದೆ ಸದಾ ನಿಲ್ಲುತ್ತವೆ.

 

ಇನ್ನು ಕಥೆಯ ಕಡೆ ಗಮನ ಹರಿಸೋಣ. ಅನೇಕರು ಕಥೆಯನ್ನು ಸೃಷ್ಟಿಸಬಲ್ಲರು. ಕಾಗಕ್ಕ, ಗೂಬಕ್ಕ ಕಥೆಗಳಿಗೆ ನಮ್ಮಲ್ಲಿ ಬರವಿಲ್ಲ. ಆದರೆ ಸೃಜನಶೀಲ ಸಾಹಿತ್ಯದ ಕೊರತೆಯಿದೆ. ಭೈರಪ್ಪನವರ ಕಥಾವಸ್ತುಗಳು ಅಪರೂಪದ್ದಾಗಿರುತ್ತವೆ. ಅದರಿಂದ ಮೈದೆಳೆದ ಪೂರಕ ಕಥೆಗಳು, ಅಲ್ಲಿ ಕಾಣುವ ಜೀವಾನನುಭವ ಹಾಗು ಎಲ್ಲಕ್ಕಿಂತ ಮಿಗಿಲಾಗಿ ತತ್ವದರ್ಶನಗಳು ನಮಗೆ ಬೆರಳೆಣಿಕೆಯ ಸಾಹಿತಿಗಳಲ್ಲಿ ಕಾಣ ಸಿಗುತ್ತವೆ.

ಕಥೆಯ ಹಿನ್ನೆಲೆ ಹಾಗು ಸಾರಾಂಶದ ಕಡೆಗೆ ಗಮನ ಹರಿಸುವುದಾದರೆ,

ಸ್ನೇಹಿತನಾದ ಅಮರುಕ ಮಹಾರಾಜನಿಂದ ಸಾರ್ಥದ ಒಳಮರ್ಮವನ್ನು ಅರಿಯಲು ಹೊರಟ ನಾಗಭಟ್ಟನಿಗೆ ದೊರೆತದ್ದು ಮಿತ್ರದ್ರೋಹ. ತನ್ನ ರಾಜ್ಯಕ್ಕೆ ಹಿಂದುರುಗಿ ಹೋಗಲಾರದೆ ಅರಸಿದ್ದು ಜೀವನ ಸಾರ್ಥಕತೆಯ ಮಾರ್ಗ. ಅಲ್ಲಿ ಗುರುಗಳಿಗೆ ಹುಡುಕಾಟ. ಯೋಗ ಮಾರ್ಗ, ತಂತ್ರಮಾರ್ಗ ಗಳ ಒಳಹೊಕ್ಕು ನಿರ್ಗಮಿಸಿದ್ದು. ಜೊತೆಗೆ ಚಂದ್ರಿಕೆ, ನಾಗಭಟ್ಟನ ಪ್ರೇಮದ ಮಜಲುಗಳು. ಹೀಗೆ ಸಾಗುತ್ತಿದ್ದ ಅವನ ಜೀವನ ಮಾರ್ಗದಲ್ಲಿ ಕಂಡದ್ದು ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಬೌದ್ಧಧರ್ಮದ ಹೇರಿಕೆ ಹಾಗು ಮತಾಂತರಕ್ಕೆ ಹೂಡುತ್ತಿದ್ದ ಮಾರ್ಗೋಪಾಯಗಳು.

ಮತ್ತೊಂದೆಡೆ ಶೈವ, ವೈಷ್ಣವ, ಶಾಕ್ತ ಇತ್ಯಾದಿ ಮತಗಳನ್ನು ಒಗ್ಗೂಡಿಸಿ ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸುವ ಶ್ರೀ ಶಂಕರ ಭಗವತ್ಪಾದರ ದರ್ಶನವನ್ನು ಲೇಖಕರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಶಂಕರಾಚಾರ್ಯರು ಹಾಗು ಮಂಡನ ಮಿಶ್ರರ ಸಂವಾದ, ಕುಮಾರರಿಲ ಭಟ್ಟರ ಪ್ರಾಯಶ್ಚಿತ ಸಂದರ್ಭಗಳು ಅದ್ಭುತವಾಗಿ ಮೂಡಿ ಬಂದಿವೆ. ಅಂತಿಮವಾಗಿ ಮುಸಲ್ಮಾನ ದೊರೆಗಳ ಆಕ್ರಮಣದಿಂದ ನಲುಗುವ ದೇಶಕ್ಕೆ ಪ್ರತಿನಿಧಿಗಳಾಗಿ ನಾಗಭಟ್ಟ, ಚಂದ್ರಿಕೆಯರು ಕಥೆಯನ್ನು ಕೊನೆಗೊಳಿಸುತ್ತಾರೆ.

ಇಂದೊಂದು ಅದ್ಬುತ ಕಥನ. ಹಲವಾರು ವಿಷಯಗಳಿಗೆ ಸಾರ್ಥ ಕಾದಂಬರಿ ಸಾಕ್ಷಿಯಾಗುತ್ತದೆ. ಬಹಳ ಸುಂದರವಾಗಿ ಓದಿಸಿಕೊಂಡು ಹೋಗುತ್ತದೆ. ಹಲವಾರು ವಿಷಯಗಳು, ಪ್ರಶ್ನೆಗಳು ನಮ್ಮನ್ನು ಸದಾ ಕಾಡುವಂತೆ ಮಾಡುತ್ತವೆ.

 

೨೯-೧೨-೨೦೨೦

ನರಸಿಂಹ ಪ್ರಸನ್ನ

 

 

 

 

 

 


Thursday, May 28, 2020

ನೀರೆ

ನೀರೆ

ಸೆರಗು ಬೀಸುತ ನಾಚಿ
ಮೇಲ್ಚಾವಣಿಯಲಿ ನೀರೆ
ಶ್ವೇತ ಸುಂದರಿ ಈಕೆ
ಕಾಣ ಬಯಸುವೆ ಮತ್ತೆ

ಕಾಫಿ ಕುಡಿಯುವ ಹೊತ್ತು
ಜೊತೆಗಿವಳ ಗಮ್ಮತ್ತು
ಬಯಸದೆ ಬಂದಿಳಿದೆ
ಮುದ ನೀಡಿ ನೀ ಮನಕೆ

ಹೊರಟೆ ಎಲ್ಲಿಗೆ ಏಕೆ
ಉಳಿಯ ಬಾರದೆ ಇಲ್ಲೇ
ಸಂಜೆ ಸಂಭ್ರಮ ಸೇರಿ
ಹೊತ್ತು ಕಳೆಯುವ ಮತ್ತೆ

ಕೆಂಪು ಕಪ್ಪಿಟ್ಟ ನಿಶೆ
ನೀ ನಿನ್ನ ಮನೆಯೊಳಗೆ
ಮತ್ತೆ ಕಾಯುವೆ ನಿನಗೆ
ತೆರೆದ ಕಿಟಕಿಯಲೊಮ್ಮೆ

ನರಸಿಂಹ ಪ್ರಸನ್ನ

Monday, February 10, 2020

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ
ನೀ ಕೊಟ್ಟ ಪ್ರೀತಿ ಹಂಚಿದೆಯೇನೋ ಅನಿಸುತ್ತಿದೆ...
ನಿನ್ನೊಡನೆಯ ಸಾಗರ ತೀರ, ತನ್ಮತೆಯ ಅತಿಸಾರ
ಸರ್ವ ಖುಷಿಯು ನಂದೆಂದು ಬೆನ್ನು ತಟ್ಟಿದ್ದೆ

ವಾರೆ ನೋಟಕೆ ಬಲಿಯಾದೆ ನಾನಂದು
ಇವಳ ನಾಚಿಕೆಯ ಹುಚ್ಚು ಮರಳಲ್ಲಿ ಗೀಚಿತ್ತು..
ಮರಳಿಗೆ ಸ್ಪರ್ಶವೋ, ಸುಖವೊ ಎರಡೂ ಸಿಕ್ಕಿತ್ತು

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಮರಳ ದಂಡೆಯಲಿ ನಾವಿಬ್ಬರೇ, ಏನೋ
ಹೊಸ ಮುಜುಗರ, ಬಲು ಸಡಗರ
ಮುಳುಗಲೊಲ್ಲದ ಸೂರ್ಯ, ನನ್ನಾಕೆಯ ರಮಿಸಿ ಕೆಂಪೇರಿದ್ದ

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಸ್ಪರ್ಶಕ್ಕೆ ಸೋತಿತ್ತು ಮನಸೆರಡು, ನೆಟ್ಟಿತ್ತು ಮೈಮನ ಹಾಯಿ ದೋಣಿಯ ಕಡೆಗೆ....
ತಂಪಾದ ತಿಳಿಗಾಳಿ ಮುತ್ತಿಟ್ಟು ಈಕೆಗೆ....
ಹಾಯ್ದು ಹೋಗಿತ್ತು ಹಾಗೆ ಸುಮ್ಮನೆ...

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ಪಾದ ತೊಳೆದು ಗುರುತನಳಿಸಿ, ಕರೆ ಕೊಟ್ಟಿತು ಸಾಗರ
ಮನೆಯ ದಾರಿ ಹಿಡಿದ ನಮಗೆ, ಸಂಜೆ ಬರುವ ಕಾತುರ
ನೀವಳಿಸಿ ದೃಷ್ಟಿ ತೆಗೆದು ಮಿಂಚು ಮೆಚ್ಚಿ ನಕ್ಕಿತು

ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ....

ನರಸಿಂಹ ಪ್ರಸನ್ನ

Friday, September 2, 2016

ಕೊನೆ ಮೊದಲು

ಕೊನೆ  ಮೊದಲು

ನಾ ಮುಂದು, ತಾ ಮುಂದು, ನಾನ್ ಎಂದೋ, ನೀನ್ ಎಂದೋ
ಕೊನೆ ಎಂದೆಂದೋ, ಅರಿತರಿಯ ಬೇಕಾಗಿದೆ ಕೊನೆ ಚೆಲ್ಲುವ ಬೆಳಕ.

ಅಪ್ಪನೋ, ಮಗನೋ, ಸಖಿಯೋ, ಸಖನೂ
ಮತ್ತೊಬ್ಬನೂ.... ಮಿಂದೇಳಬೇಕಿ ಬೆಳಕಲ್ಲಿ

ಮೊದಲ ಕೊನೆಯುಂಟು, ಕೊನೆಯ ಮೊದಲುಂಟು. ಅರಿವುಂಟು ಕೊನೆಯ
ಮೊದಲುಗಳ  ಸಿಲುಕಿ ನಾವ್ ವ್ಯೂಹ ವರ್ತುಲದಿ

ಮೇಲೊಮ್ಮೆ ಕೆಳಗೊಮ್ಮೆ ಉರುಳಿ ಬಳಲುವುದೊಮ್ಮೆ ಸುಗಮ ಸಂಚಾರ
ಮತ್ತೊಮ್ಮೆ. ಗುರಿಯಿರದೆ ಬಸವಳಿದು ಮಂದಗತಿಯಲ್ಲೊಮ್ಮೊಮ್ಮೆ

ಹೀಗೇಕೆ ಅರಚುವೆ ತೆಪ್ಪಗಿರು ಸುಮ್ಮನೆ, ನಿಯತಾತ್ಮಾ ನೀನಲ್ಲ ಯಾನ ನಿನದಲ್ಲ
ಶಾಂತನಿರು ಪ್ರತಿಘಳಿಗೆ ದಡ ಸೇರಿ ಕರಗುವೆ ನೀ ನಿನ್ನ ಮರೆಯುವೆ

ನರಸಿಂಹ ಪ್ರಸನ್ನ

Tuesday, May 5, 2009

ಇಷ್ಟು ಕಾಲ ಒಟ್ಟಿಗಿದ್ದು

ರಚನೆ : ಹೆಚ್. ಎಸ್. ವೆಂಕಟೇಶಮೂರ್ತಿ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವಾ?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು hayidONige....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ....ಮಣ್ಣ
ಮುತ್ತು ದೊರಕಿತೇನು ನೀಲಿ ಬಾನಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇನು ಕನ್ನಡಿಯ ಪಾಲಿಗೆ....?

Saturday, April 25, 2009

ಸುಪ್ರಭಾತ

ಸುಪ್ರಭಾತ

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಂದ ಮಾಮನು ಮನೆಗೆ ಹೊರಟಾಯಿತು.
ಮೂಢಣದಿ ಕಿರಣಗಳು ಮನೆ ಸೇರಿತು
ಚುಕ್ಕಿ ಬಾನಲಿ ಕೂಡ ಮರೆಯಾಯಿತು
ಪಕ್ಷಿ ಸಂಕುಲ ಎದ್ದು ಹಾರಾಡಿತು

ಗಂಟೆ ನಾದದಿ ಗುಡಿಯು ತೆರೆದಾಯಿತು
ವೇದ ಘೋಷದಿ ದಿನವು ಶುರುವಾಯಿತು
ಮಂಜು ಎಲೆಗಳ ಮೇಲೆ ನಲಿದಾಡಿತು
ಮನೆಯ ಮುಂದಿನ ರಂಗೋಲಿ ಕುಣಿದಾಡಿತು.

ಎಳು ಕಂದಮ್ಮ ನಿ ಬೆಳಗಾಯಿತು
ಎದ್ದೇಳು ಕಂದ ನಿ ಬೆಳಗಾಯಿತು

ಚಿ.ಸ.ನ

Tuesday, April 7, 2009

ರವಿಯು ಎಲ್ಲಿಗೆ ಹೋದನು?

ರವಿಯು ಎಲ್ಲಿಗೆ ಹೋದನು?
ಚೌಕಕ್ಕೆ ಭಾರಕ್ಕೆ ಸೋತಿತ್ತು ನನ್ನ ಮನ
ಗಜ್ಜುಗ ವಾಟದಿ ಗಲೀಜಾದ ಚಡ್ಡಿ
ಕುಂಟುತ್ತ ಓಡುತ್ತ ವಿಶ್ರಾಂತಿ ಪಡೆಯುತ್ತಾ
ಕದ್ದ ಮಾವಿನ ಕಾಯಿ ಚಪ್ಪರಿಸಿತ್ತು ಬಾಯಿ

ರಾಮನ ನಿಷ್ಟೆಯಲಿ ಹನುಮನ ಭಕ್ತಿಯಲಿ
ಭೀಮನ ಬಲದಲ್ಲಿ ಕತೆಯಲ್ಲಿ ಮುಳುಗಿದ್ದೆ
ನರಿ, ಸಿಂಹ, ಮೊಲಗಳ ನೀತಿ ಕತೆಯನು
ಕೇಳಿ, ಬೆಳೆದಿದ್ದೆ ನಾ ಪುಟ್ಟ ಬಾಲಕನಾಗಿ

ಹುರಿಹಿಟ್ಟು ತಂಬಿಟ್ಟು ಕೈತುತ್ತು ನಾತಿಂದೆ
ಹಾಲ್ಗಿಣ್ಣು ಮೊಸರು ಮಜ್ಜಿಗೆ ಹರಿದಿತ್ತು
ಹುರಿಗಾಳು ಚಕ್ಕುಲಿ ತೆನ್ಕೊಳಲು ಸೇವೆ
ಅಕ್ಕರೆಯ ಲಾಲಿ ಸೆರೆಗೊಳಗೆ ನಿದ್ದೆ

ಕಳೆದಿತ್ತು ಬೇಸಿಗೆ, ಮರಳಿದ್ದೆ ಗೂಡಿಗೆ
ಹೊತ್ತು ನಾ ಅಜ್ಜಿ ತಾತರ ನೆನಪು
ಮುಂದಿನ ಬೆಂಚಲ್ಲಿ, ಮುಂದಿನ ತರಗತಿಯಲಿ
ಮಾಸ್ತರರು ಕೇಳಿದರು, "ರವಿಯು ಎಲ್ಲಿಗೆ ಹೋದನು?".

ಚಿ.ಸ.ನ.

ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )

ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...