ಸಾರ್ಥ
ಕ'ಥೆ'ಯ ಭಾವ
ಸಾರ್ಥ
ಎಂಬುದು ವಾಣಿಜ್ಯ ಪದ್ಧತಿ. ಎಂಟನೇ ಶತಮಾನದಲ್ಲಿ ಆನೆ, ಕುದುರೆ, ಹೇಸರಗತ್ತೆ
ಹೀಗೆ ನೂರಾರು ಗಾಡಿಗಳ ಮೇಲೆ ವಾಣಿಜ್ಯ ಪದಾರ್ಥಗಳನ್ನು
ಹೇರಿಕೊಂಡು ವ್ಯಾಪಾರ ಮಾಡುತ್ತ ದೂರ ದೂರ ದೇಶಗಳಲ್ಲಿ
ಸಂಚರಿಸುವುದಕ್ಕೆ ಸಾರ್ಥ ಎನ್ನುತ್ತಿದ್ದರು. ಎಂಟನೇ ಶತಮಾನದಲ್ಲಿ ನಡೆದಿರಬಹುದಾರ ಕಲ್ಪನೆಯೇ ಇಲ್ಲಿಯ ಕಥಾ ವಸ್ತು.
ಈ ಸಾರ್ಥದೊಡೆಯ ಎಸ್. ಎಲ್ ಭೈರಪ್ಪ
ನವರದೊಡನೆ ಒಂದು ಕಿರು ಪ್ರಯಾಣ
ಮಾಡಿ ಬರೋಣ.
ಯಾವುದೇ
ಕಾದಂಬರಿಗಳು ನಮಗೆ ಇಷ್ಟವಾಗಬೇಕಾದರೆ ಅದರ
ಅನೇಕ ವಿಷಯಗಳು ನಮ್ಮ ಮೇಲೆ ಪ್ರಭಾವ
ಬೀರುತ್ತವೆ. ಮುಖ್ಯವಾಗಿ ನಮಗೆ ಅದರ ಪಾತ್ರಗಳು
ಸನಿಹವಾಗುತ್ತವೆ. ಇವು ನಮ್ಮ ಜೀವನದಲ್ಲಿ
ಎಂದೋ ಬಂದು ಹೋದ, ನಾವು
ನೋಡಿದ, ಕೇಳಿದ ವ್ಯಕ್ತಿಗಳಿಗೆ ಹೋಲುತ್ತವೆ. ಇಲ್ಲಿ ವ್ಯಕ್ತ ಪಡಿಸುವ ಭಾವಗಳು ನಮ್ಮದಾಗಿರುತ್ತವೆ ಹಾಗು ನಮ್ಮನ್ನು ಕಾಡುತ್ತಿರುತ್ತವೆ.
ನಮ್ಮಲ್ಲಿ ಮೂಡುವ ಅನೇಕ ವಿಷಯಗಳು, ಪ್ರಶ್ನೆಗಳು
ಈ ಪಾತ್ರಗಳಲ್ಲಿ ಮೂಡುತ್ತವೆ. ಇಲ್ಲಿ ಬರುವ ಸಂದರ್ಭಗಳು ನಮಗೆ
ಸಕಾರಾತ್ಮಕವಾಗಿ ಪ್ರಚೋದಿಸುತ್ತವೆ. ಇವೆಲ್ಲ ಅಂಶಗಳು ನಮಗೆ ಭೈರಪ್ಪನವರ ಕಾದಂಬರಿಗಳಲ್ಲಿ
ಸಾಮಾನ್ಯವಾಗಿ ಕಾಣಸಿಗುತ್ತವೆ. ಹಾಗೆಯೇ ಇಷ್ಟವೂ ಆಗುತ್ತವೆ.
ಸಾರ್ಥದಲ್ಲಿ
ಬರುವ ಕೆಲವು ಸಂದರ್ಭೋಕ್ತಿಗಳನ್ನು ಗಮನಿಸೋಣ. ಈ ಕಾದಂಬರಿಯ ಪಾತ್ರಗಳು
ಬೇರೆ ಬೇರೆ ಸಂದರ್ಭಗಳಲ್ಲಿಆಡಿದ ಮಾತುಗಳು
ಇವು.
೧. ಆತ್ಮ ಕಥನದಲ್ಲಿ ಕಥನವು
ನಾನು, ನಾನು, ನಾನು ಎಂಬ ಹಂದರದಲ್ಲಿ
ಸಿಕ್ಕಿಕೊಂಡು ಬಿಡುತ್ತವೆ.
೨. ಒಂದು ಶಾಸ್ತ್ರದ ರಹಸ್ಯವನ್ನು
ಪೂರ್ಣವಾಗಿ ಪರಿಚಯಿಸಿಕೊಳ್ಳುವವರೆಗೂ ಆ ಶಾಸ್ತ್ರವನ್ನು ಖಂಡಿಸಲು
ಸಾಧ್ಯವಿಲ್ಲ.
೩. ರೂಪಾತೀತವನ್ನು ರೂಪದಲ್ಲಿ ಭಾವಿಸಿ ಉಪಾಸಿಸುವ ಅವಕಾಶವಿಲ್ಲದಿದ್ದರೆ ಜನಸಾಧಾರಣರಿಗೆ ಶೂನ್ಯ ಕವಿಯುತ್ತದೆ.
೪. ವಿಗ್ರಹವಿಲ್ಲದೆಯೂ ದೇವರ ಪ್ರಾರ್ಥನೆ ಸಾಧ್ಯ.
ಮೂಲ ವೈದೀಕ ಪದ್ದತಿಯಲ್ಲಿ ವಿಗ್ರಹವು ಇಲ್ಲ, ಗುಡಿಯೂ ಇಲ್ಲ, ಹೋಮ ಹವನಗಳು ಮಾತ್ರ.
೫. ನೋವನ್ನು ಸೃಷ್ಟಿಸಬಹುದು. ಅದನ್ನು ವಿಶೇಷವಾಗಿ ಸೃಷ್ಟಿಸುವ ಶಕ್ತಿ ರೋಗರುಜಿನಾದಿಗಳಿಗಿಂತ ಹೆಚ್ಚಾಗಿ ಮನುಷ್ಯನಿಗೆ ಮಾತ್ರ ಉಂಟು.
ಈ ರೀತಿಯ ಅನೇಕ ಆಲೋಚನೆಗಳು , ಪ್ರಶ್ನೆಗಳು
ನಮ್ಮಲ್ಲಿಯೂ ಮೂಡಿದೆಯಲ್ಲವೇ ? ನಿರ್ಗುಣ, ನಿರಾಕಾರ, ಪರಬ್ರಹ್ಮ ಸ್ವರೂಪಿಯಾದ ಆ ಭಗವಂತನನ್ನು ಹೇಗೆ
ಧ್ಯಾನಿಸುವುದು ಎಂದು ನಾನು ಹಲವು
ಬಾರಿ ಯೋಚಿಸಿದ್ದೆ. ಎಷ್ಟೋ ಬಾರಿ ಯಾವುದೋ ವಿಷಯ
ಚರ್ಚೆಗಿಳಿದಾಗ ವಿಷಯದ ಆಳ ತಿಳಿಯದೆ ಮುಖಭಂಗವಾದದ್ದು
ಉಂಟು. ಹೀಗೆ ಹತ್ತು ಹಲವು
ವಿಷಯಗಳು ನನ್ನ ಯೋಚನೆಗಳಿಗೆ ಲಯಕೊಟ್ಟಿವೆ.
ಹಾಗು ಇವು ನಮ್ಮೊಂದಿದೆ ಸದಾ
ನಿಲ್ಲುತ್ತವೆ.
ಇನ್ನು
ಕಥೆಯ ಕಡೆ ಗಮನ ಹರಿಸೋಣ.
ಅನೇಕರು ಕಥೆಯನ್ನು ಸೃಷ್ಟಿಸಬಲ್ಲರು. ಕಾಗಕ್ಕ, ಗೂಬಕ್ಕ ಕಥೆಗಳಿಗೆ ನಮ್ಮಲ್ಲಿ ಬರವಿಲ್ಲ. ಆದರೆ ಸೃಜನಶೀಲ ಸಾಹಿತ್ಯದ
ಕೊರತೆಯಿದೆ. ಭೈರಪ್ಪನವರ ಕಥಾವಸ್ತುಗಳು ಅಪರೂಪದ್ದಾಗಿರುತ್ತವೆ. ಅದರಿಂದ ಮೈದೆಳೆದ ಪೂರಕ ಕಥೆಗಳು, ಅಲ್ಲಿ
ಕಾಣುವ ಜೀವಾನನುಭವ ಹಾಗು ಎಲ್ಲಕ್ಕಿಂತ ಮಿಗಿಲಾಗಿ
ತತ್ವದರ್ಶನಗಳು ನಮಗೆ ಬೆರಳೆಣಿಕೆಯ ಸಾಹಿತಿಗಳಲ್ಲಿ
ಕಾಣ ಸಿಗುತ್ತವೆ.
ಕಥೆಯ
ಹಿನ್ನೆಲೆ ಹಾಗು ಸಾರಾಂಶದ ಕಡೆಗೆ
ಗಮನ ಹರಿಸುವುದಾದರೆ,
ಸ್ನೇಹಿತನಾದ
ಅಮರುಕ ಮಹಾರಾಜನಿಂದ ಸಾರ್ಥದ ಒಳಮರ್ಮವನ್ನು ಅರಿಯಲು ಹೊರಟ ನಾಗಭಟ್ಟನಿಗೆ ದೊರೆತದ್ದು
ಮಿತ್ರದ್ರೋಹ. ತನ್ನ ರಾಜ್ಯಕ್ಕೆ ಹಿಂದುರುಗಿ
ಹೋಗಲಾರದೆ ಅರಸಿದ್ದು ಜೀವನ ಸಾರ್ಥಕತೆಯ ಮಾರ್ಗ.
ಅಲ್ಲಿ ಗುರುಗಳಿಗೆ ಹುಡುಕಾಟ. ಯೋಗ ಮಾರ್ಗ, ತಂತ್ರಮಾರ್ಗ
ಗಳ ಒಳಹೊಕ್ಕು ನಿರ್ಗಮಿಸಿದ್ದು. ಜೊತೆಗೆ ಚಂದ್ರಿಕೆ, ನಾಗಭಟ್ಟನ ಪ್ರೇಮದ ಮಜಲುಗಳು. ಹೀಗೆ ಸಾಗುತ್ತಿದ್ದ ಅವನ
ಜೀವನ ಮಾರ್ಗದಲ್ಲಿ ಕಂಡದ್ದು ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಬೌದ್ಧಧರ್ಮದ ಹೇರಿಕೆ ಹಾಗು ಮತಾಂತರಕ್ಕೆ ಹೂಡುತ್ತಿದ್ದ
ಮಾರ್ಗೋಪಾಯಗಳು.
ಮತ್ತೊಂದೆಡೆ
ಶೈವ, ವೈಷ್ಣವ, ಶಾಕ್ತ ಇತ್ಯಾದಿ ಮತಗಳನ್ನು ಒಗ್ಗೂಡಿಸಿ ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸುವ ಶ್ರೀ ಶಂಕರ ಭಗವತ್ಪಾದರ
ದರ್ಶನವನ್ನು ಲೇಖಕರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಶಂಕರಾಚಾರ್ಯರು ಹಾಗು ಮಂಡನ ಮಿಶ್ರರ
ಸಂವಾದ, ಕುಮಾರರಿಲ ಭಟ್ಟರ ಪ್ರಾಯಶ್ಚಿತ ಸಂದರ್ಭಗಳು ಅದ್ಭುತವಾಗಿ ಮೂಡಿ ಬಂದಿವೆ. ಅಂತಿಮವಾಗಿ
ಮುಸಲ್ಮಾನ ದೊರೆಗಳ ಆಕ್ರಮಣದಿಂದ ನಲುಗುವ ದೇಶಕ್ಕೆ ಪ್ರತಿನಿಧಿಗಳಾಗಿ ನಾಗಭಟ್ಟ, ಚಂದ್ರಿಕೆಯರು ಕಥೆಯನ್ನು ಕೊನೆಗೊಳಿಸುತ್ತಾರೆ.
ಇಂದೊಂದು
ಅದ್ಬುತ ಕಥನ. ಹಲವಾರು ವಿಷಯಗಳಿಗೆ
ಸಾರ್ಥ ಕಾದಂಬರಿ ಸಾಕ್ಷಿಯಾಗುತ್ತದೆ. ಬಹಳ ಸುಂದರವಾಗಿ ಓದಿಸಿಕೊಂಡು
ಹೋಗುತ್ತದೆ. ಹಲವಾರು ವಿಷಯಗಳು, ಪ್ರಶ್ನೆಗಳು ನಮ್ಮನ್ನು ಸದಾ ಕಾಡುವಂತೆ ಮಾಡುತ್ತವೆ.
೨೯-೧೨-೨೦೨೦
ನರಸಿಂಹ
ಪ್ರಸನ್ನ